ಬ್ರಿಟಿಷ್ ವಸಾಹತುಶಾಹಿ ಅಧಿಕಾರದ ವಿರುದ್ಧ ಹೋರಾಡಿ ಈ ನಾಡಿನ ಸ್ವಾತಂತ್ರ್ಯಕ್ಕಾಗಿ ಪ್ರಾಣಾರ್ಪಣೆ ಮಾಡಿದ ಸಂಗೊಳ್ಳಿ ರಾಯಣ್ಣನ ನೆನಪಿಗಾಗಿ ಸರಕಾರವು ಪ್ರಾಧಿಕಾರ ರಚಿಸುತ್ತಿರುವುದು ಸ್ತುತ್ಯರ್ಹವಾದ ಕಾರ್ಯ. ಪ್ರತಿಷ್ಠಾನವನ್ನು ಪ್ರಾಧಿಕಾರವನ್ನಾಗಿ ಪರಿವರ್ತಿಸಿ ಸಂಬಂಧಿಸಿದ ಸ್ಥಳಗಳನ್ನು ಉನ್ನತೀಕರಿಸುವ ಉದ್ದೇಶ ಈ ಸಂಸ್ಥೆಯದ್ದಾಗಿದೆಯೆಂದು ಸರಕಾರದ ಅಧಿಕಾರಿಗಳು ಹೇಳಿಕೆ ನೀಡಿದ್ದಾರೆ.
ಅಲ್ಲದೇ ಮುಖ್ಯವಾಗಿ ಕ್ರಾಂತಿವೀರನ ಕುರಿತು ವಸ್ತು ಸಂಗ್ರಹಾಲಯ ನಿರ್ಮಾಣ, ಅಧ್ಯಯನ ಮತ್ತು ಸಂಶೋಧನೆಗಳಿಗಾಗಿ ಹೆಚ್ಚಿನ ಅನುವು ಮಾಡಿಕೊಡುವ ಉದ್ದೇಶಗಳನ್ನು ಈ ಪ್ರಾಧಿಕಾರವು ಹೊಂದಲಾಗಿದೆ ಎಂಬ ಉಲ್ಲೇಖಗಳಿವೆ.
ಇಂಥ ಮಹತ್ ಉದ್ದೇಶಗಳನ್ನಿಟ್ಟುಕೊಂಡು ಮುಖ್ಯಮಂತ್ರಿಗಳು ಹಾಗೂ ಸಂಬಂಧಿಸಿದ ಆಡಳಿತ ವರ್ಗವನ್ನು ಭೇಟಿಯಾದ ನಿಯೋಗದಲ್ಲಿರುವ ವ್ಯಕ್ತಿಗಳು ಆ ದಿನ ವ್ಯಕ್ತಪಡಿಸಿದ ಅಭಿಪ್ರಾಯಗಳನ್ನು ಗಮನಿಸಿದರೆ ಈ ವಿಚಾರಗಳು ಕೆಲವು ಗುಮಾನಿಗಳಿಗೆ ಎಡೆಮಾಡಿಕೊಡಬಹುದೆಂದೆನಿಸುತ್ತವೆ. ನಿಯೋಗದಲ್ಲಿರುವವರ ಅಭಿಪ್ರಾಯಗಳು ಒಂದು ನಿರ್ದಿಷ್ಟ ವರ್ಗ ಸಮುದಾಯಕ್ಕೆ ರಾಯಣ್ಣನನ್ನು ಹಾಗೂ ಅವನ ಐತಿಹಾಸಿಕ ವ್ಯಕ್ತಿತ್ವವನ್ನು ಸೀಮಿತಗೊಳಿಸುವ ಹುನ್ನಾರವು ಗೋಚರವಾಗುತ್ತದೆ. ಕಾರಣ ರಾಯಣ್ಣನನ್ನು ತಮ್ಮವನೆಂದು ಕಲ್ಪಿಸಿಕೊಂಡು ವಿಜೃಂಭಿಸುತ್ತಿರುವ ನಿರ್ದಿಷ್ಟ ಆ ಸಮುದಾಯಕ್ಕೆ ಸಂಬಂಧಿಸಿರುವವನಲ್ಲವೆಂದು ಈ ಕೆಳಗೆ ವಿವರಿಸಿರುವ ಐತಿಹಾಸಿಕ ದಾಖಲೆಗಳು ಸ್ಪಷ್ಟಪಡಿಸುತ್ತವೆ...
ಇನ್ನೊಂದೆಡೆ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಸಂಘಟನೆ ಕಟ್ಟಿಕೊಂಡು ರಾಜಕೀಯ ಮಾಡುತ್ತಿರುವ ಹಾಗೂ ಒಬ್ಬ ಧೀರ ನಾಯಕನನ್ನು ತಮ್ಮವನೆಂದು ಬಿಂಬಿಸಿಕೊಳ್ಳಲು ಮುಂದಾಗಿರುವುದು ದುರದೃಷ್ಟಕರ.
ಕ್ರಾಂತಿವೀರ ರಾಯಣ್ಣನು ಕಿತ್ತೂರು ನಾಡಿನಲ್ಲಿರುವ ಸಂಗೊಳ್ಳಿ ಗ್ರಾಮಕ್ಕೆ ಸಂಬಂಧಿಸಿದವನೆಂದು ಖಚಿತವಾಗಿ ಹೇಳುವಷ್ಟು ಪುರಾವೆಗಳು ಅವನ ಸಮುದಾಯದ ಕುರಿತಂತೆ ಸ್ಪಷ್ಟವಾದ ವಿವರ ನೀಡುವುದಿಲ್ಲ. ಅವನು ಹಾಲುಮತ ಸಮುದಾಯಕ್ಕೆ ಸೇರಿದವನೆಂಬ ಚಾಲ್ತಿಯಲ್ಲಿರುವ ವಿವರಗಳು ಕಪೋಲಕಲ್ಪಿತದಿಂದ ಕೂಡಿರುವವು ಹಾಗೂ ಸತ್ಯಕ್ಕೆ ದೂರವಾದವುಗಳೆಂದೇ ಹೇಳಬೇಕಾಗುತ್ತದೆ. ಹಾಗಾಗಿ ಇಂಥ ಚಾರಿತ್ರಿಕ ಮಿಥ್ಯಗಳನ್ನು ತಿಳಿದುಕೊಳ್ಳುವ ಅವಶ್ಯಕತೆ ಸದ್ಯ ಇನ್ನೂ ಹೆಚ್ಚಾಗಿದೆ. ಆ ಕುರಿತು ಸೂಕ್ಷ್ಮ ತಲಸ್ಪರ್ಶಿಯವಾದ ಸಂಶೋಧನೆಗಳ ಜರೂರತೆಯಿದೆ.
ಪ್ರಕಟಗೊಂಡಿರುವ ಕೆಲವು ದಾಖಲೆಗಳಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬೇಡ ಅಥವಾ ನಾಯಕ ಸಮುದಾಯಕ್ಕೆ ಸಂಬಂಧಿಸಿದವನೆಂಬ ಸ್ಪಷ್ಟ ವಿವರಗಳಿವೆ. ಅಂಥ ಖಚಿತವಾದ ವಿವರಗಳನ್ನು ಶ್ರೀಯುತರಾದ ವೆಂಕಟ ರಂಗೋ ಕಟ್ಟಿ ಅವರು ಕ್ರಿ.ಶ.೧೮೯೩ರಲ್ಲಿ ಸಂಪಾದಿಸಿರುವ ’ಮುಂಬೈ-ಕರ್ನಾಟಕದ ಗ್ಯಾಜಿಟಿಯರ್’ನಲ್ಲಿ ಕಾಣುತ್ತೇವೆ. ಅವು ಅವನನ್ನು ಬೇಡ ಸಮುದಾಯದವನೆಂದೇ ದಾಖಲಿಸಿವೆ.
ಆಯಾ ಪ್ರದೇಶದ ಇತಿಹಾಸ ಮತ್ತು ಸಂಸ್ಕೃತಿ ವಿವರಗಳನ್ನು ಗ್ಯಾಜಿಟಿಯರ್‌ಗಳಲ್ಲಿ ಕ್ರೂಢೀಕರಿಸಿ ಪ್ರಕಟಿಸುವ ಇಂಥ ಮಹತ್ವದ ಕಾರ್ಯಗಳು ಬ್ರಿಟಿಷ್ ಆಡಳಿತಾವಧಿಯಲ್ಲಿ ನಡೆದವು. ಮುಖ್ಯವಾಗಿ ಭಾರತೀಯ ಜನಸಮುದಾಯಗಳ ರೀತಿ-ನೀತಿಗಳನ್ನು ಅರಿತು ಆ ಹಿನ್ನೆಲೆಯಲ್ಲಿ ರಾಜ್ಯಾಡಳಿತ ನಿರ್ವಹಿಸುವ ಉದ್ದೇಶಗಳು ಇಂಥ ನಿರ್ಮಾಣಗಳ ಹಿಂದಿದ್ದವು ಎಂದು ಪರಿಭಾವಿಸಲಾಗಿದೆ. ಅಂಥದ್ದೇ ಕಾರ್ಯಗಳನ್ನು ಹತ್ತೊಂಬತ್ತನೆಯ ಶತಮಾನದ ನಡುಗಾಲದ(೧೮೫೦-೬೦) ಸಂದರ್ಭದಲ್ಲಿ ಮುಂಬೈ-ಕರ್ನಾಟಕ ಪ್ರದೇಶಗಳಿಗೆ ಸಂಬಂಧಿಸಿದಂತೆ ಜೇಮ್ಸ್ ಕ್ಯಾಂಬೆಲ್ ಎಂಬ ಅಧಿಕಾರಿಯು ಇಂಗ್ಲೀಷ್ ಭಾಷೆಯಲ್ಲಿ ಬರೆದು ಪ್ರಕಟಿಸಿದ .
ಅದೇ ಮಾದರಿಯ ಹಾಗೂ ಅದರಲ್ಲಿರುವ ಬಹುತೇಕ ವಿವರಗಳನ್ನು ಶ್ರೀಯುತ ವೆಂಕಟ ರಂಗೋ ಕಟ್ಟಿ ಅವರು ಹತ್ತೊಂಬತ್ತನೆಯ ಶತಮಾನದ ತೀರ ಇಳಿಗಾಲದಲ್ಲಿ(೧೮೯೩) ಈ ಪ್ರದೇಶಕ್ಕೆ ಸಂಬಂಧಿಸಿದ ವಿವರಗಳನ್ನು ಕನ್ನಡದಲ್ಲಿ ಪ್ರಕಟಿಸಿದರು(ಏಶಿಯನ್ ಎಜುಕೇಶನಲ್ ಸರ್ವೀಸಸ್, ಹೊಸ ದೆಹಲಿ, ೧೯೮೪). ಅವರಿಬ್ಬರು ಸಂಪಾದಿಸಿದ ಗ್ಯಾಜಿಟಿಯರ್‌ನಲ್ಲಿ ಸಂಗೊಳ್ಳಿ ರಾಯಣ್ಣನ ಕುರಿತು ಕೆಲವು ಮಹತ್ವದ ವಿಷಯಗಳು ಪ್ರಕಟಗೊಂಡಿರುವುದನ್ನು ಗಮನಿಸಬಹುದು.
ಗ್ಯಾಜೆಟಿಯರ್‌ನ ಮೂರನೆಯ ಭಾಗದ ಪುಟಸಂಖ್ಯೆ ೧೯೯ರಲ್ಲಿ ಪ್ರಕಟಗೊಂಡ ವಿವರಗಳು ಹೀಗಿವೆ. ಹೆಸರಾದ ಸಂಗೊಳ್ಳಿಯ ರಾಯಣ್ಣನು ಬೇಡನಿದ್ದನೆಂಬ ಸ್ಪಷ್ಟ ಉಲ್ಲೇಖವಿದೆ. ಇಂಥ ಬೇಡರ ಕುರಿತು ಇನ್ನು ಹಲವು ವಿವರಗಳು ಅಲ್ಲಿವೆ. ಅವರ ಗುಣಸ್ವಭಾವಗಳನ್ನು ಅವರಲ್ಲಿರುವ ಸಾಮ್ಯತೆಗಳನ್ನು ಅವರ ಸಂಸ್ಥಾನಗಳ ಬಗೆಗಿರುವ ವಿವರಗಳನ್ನು ಶ್ರೀಯುತರು ವಿಸ್ತಾರವಾಗಿ ನೀಡಿದ್ದಾರೆ. ಅಲ್ಲದೇ ಇದೇ ಗ್ರಂಥದಲ್ಲಿರುವ ಪುಟ ಸಂಖ್ಯೆ ೩೬೨ರಲ್ಲಿ ಕಿತ್ತೂರು ಸಂಸ್ಥಾನದ ಆಶ್ರಿತನಾದ ಸಂಗೊಳ್ಳಿಯ ರಾಯ ನಾಯಕನೆಂಬುವನು ಬಂಡಾಯ ಮಾಡಲಾಗಿ ಸಂಪಗಾವಿ(ಬೈಲಹೊಂಗಲ ತಾಲೂಕು) ಮಾಮಲೇದಾರ/ತಹಶಿಲ್‌ದಾರ ಕೈಯಿಂದ ಸರಕಾರದವರು ಅವನನ್ನು ಹಿಡಿಸಿ ಗಲ್ಲಿಗೇರಿಸಿದರು ಎಂಬ ಉಲ್ಲೇಖವಿದೆ. ಪುಟಸಂಖ್ಯೆ ೫೦೪ ಮತ್ತು ೫೦೮ರಲ್ಲಿ ಅದೇ ಬಗೆಯ ವಿವರಗಳು ದಾಖಲಾಗಿವೆ.
ರಾಯಣ್ಣನು ಗತಿಸಿದ ಕೆಲವೇ ವರ್ಷಗಳಲ್ಲಿ ಜೇಮ್ಸ್ ಕ್ಯಾಂಬೆಲ್ ಅವನ ಹೋರಾಟ ಹಾಗೂ ಸಮುದಾಯಗಳ ಮತ್ತು ಅವನು ಹೊಂದಿದ್ದ ಸಂಬಂಧಿಗಳ ಬಗೆಗೆ ವಿವರಗಳನ್ನು ತಾನು ಸಂಪಾದಿಸಿರುವ ಗ್ಯಾಜಿಟಿಯರ್‌ನಲ್ಲಿ ದಾಖಲಿಸಿದ್ದಾನೆ. ಅಂಥ ವಿವರಗಳು ಅವನ ಜೀವಿತಾವಧಿಯಲ್ಲಿ ಕೇಳಿಸಲ್ಪಟ್ಟಂಥವು. ಹಾಗಾಗಿ ಅವು ಸತ್ಯಕ್ಕೆ ತುಂಬಾ ಹತ್ತಿರವಾದವುಗಳಾಗಿರುವುದರಲ್ಲಿ ಸಂಶಯವಿಲ್ಲ. ಅವನು ಪ್ರಕಟಿಸಿದ ವಿವರಗಳನ್ನು ಕೆಲವು ವರ್ಷಗಳಾನಂತರ ರಾಯಣ್ಣನ ಕುರಿತಿರುವ ಘಟನೆಗಳು ಇನ್ನು ಹಸಿ ಹಸಿ ಇರುವಾಗಲೇ ಶ್ರೀಯುತ ವೆಂಕಟ ರಂಗೋ ಕಟ್ಟಿ ಅವರು ಕನ್ನಡದಲ್ಲಿ ಪ್ರಕಟಿಸಿದರು. ಅವರು ನೀಡಿರುವ ವಿವರಗಳು ಸಹ ಸತ್ಯಕ್ಕೆ ಹತ್ತಿರವಾದವುಗಳಾಗಿವೆ. ಇನ್ನೂ ಕೆಲವು ವಿವರಗಳು ಸಂಗೊಳ್ಳಿ ರಾಯಣ್ಣನು ಬೇಡ ಸಮುದಾಯದವನೆಂಬುದಕ್ಕೆ ಸ್ಪಷ್ಟ ಪುರಾವೆಗಳನ್ನು ಒದಗಿಸುತ್ತವೆ.
ಅಲ್ಲದೇ ಇನ್ನೊಂದು ಮುಖ್ಯವಾದ ಆಧಾರವು ರಾಯಣ್ಣನ ಕುರಿತಂತೆ ವಿವರಿಸುತ್ತದೆ. ಅದೆಂದರೆ ಎಚ್.ಜೆ.ಸ್ಟೋಕ್ಸ್ ಎಂಬ ಆಂಗ್ಲ ಅಧಿಕಾರಿಯು ಬರೆದ ಎ ಹಿಸ್ಟಾರಿಕಲ್ ಅಕೌಂಟ್ ಆಫ್ ಬೆಲಗಾಮ್ ಡಿಸ್ಟ್ರಿಕ್ಟ್(೧೮೭೦). ಇದರಲ್ಲಿ ರಾಯಣ್ಣನ ವೃತ್ತಾಂತವು ಮೊಟ್ಟ ಮೊದಲಿಗೆ ಪ್ರಕಟವಾಯಿತೆಂದು ಹೇಳಲಾಗುತ್ತದೆ.
ಮೋಸದಿಂದ ರಾಯಣ್ಣನನ್ನು ಸೆರೆ ಹಿಡಿಯಲಾಗಿ ಅವನ ತೀವ್ರತರ ವಿಚಾರಣೆ ಸಂಪಗಾವಿಯಲ್ಲಿ ನಡೆಯುತ್ತದೆ. ಆ ಸಂದರ್ಭದಲ್ಲಿ ತನ್ನ ಜೊತೆಗಾರರಿದ್ದವರ ಬಗೆಗೆ ಕೆಲವು ಹೆಸರುಗಳನ್ನು ತನ್ನ ಜವಾಬಿನಲ್ಲಿ ನೀಡುತ್ತಾನೆ. ಆದವಾನಿ ಗುಬ್ಬಾ-ಹಸಬಿ, ದೇಗಾಂವಿ ಭೀಮನಾಯಕ, ಬೆಳವಡಿ ರುದ್ರನಾಯಕ, ಬಸ್ತವಾಡ ಬಾಳನಾಯಕ, ಬೆಳವಂಡಿ ಯಲ್ಲಪ್ಪ ನಾಯಕ, ಸಂಗೊಳ್ಳಿ ಬಾಳನಾಯಕ ಮತ್ತು ಯಲ್ಲಪ್ಪ ನಾಯಕ ಹಾಗೂ ಇನ್ನಿತರರ ಹೆಸರುಗಳನ್ನು ಹೇಳುತ್ತಾನೆ. ಇಲ್ಲಿ ಉಲ್ಲೇಖಿತವಾದ ಹೆಸರುಗಳಲ್ಲಿ ಹೆಚ್ಚಿನವು ಬೇಡರಿಗೆ ಸಂಬಂಧಿಸಿದವುಗಳೆಂದು ಖಚಿತವಾಗಿಯೇ ಹೇಳಬಹುದು. ಈ ವಿಷಯಗಳು ಯಾರಿಗೂ ಅರ್ಥವಾಗಲಾರದ ಸಂಗತಿಗಳೇನಲ್ಲ(ಮಾಹಿತಿಗಾಗಿ ಬೆಳಗಾವಿ ಸಂಸ್ಕೃತಿ, ಸಂ.ಸಂಜೂಕಾಟ್ಕರ್, ಬೆಳದಿಂಗಳು ಪ್ರಕಾಶನ, ಬೆಳಗಾವಿ, ೨೦೦೧).
ಇನ್ನೊಂದು ಆಧಾರವು ಈ ವಿವರವನ್ನು ಸ್ಪಷ್ಟಪಡಿಸುತ್ತದೆ. ರಾಯಣ್ಣನ ಅನತಿಯ ಮೇರೆಗೆ ಬ್ರಿಟಿಷರ ವಿರುದ್ಧದ ಹೋರಾಟದಲ್ಲಿ ಸುರಪುರದ ಸೈನ್ಯವನ್ನು ಆಮಂತ್ರಿಸಿ ಸಹಾಯ ಬೇಡಿದ್ದ ಎಂಬ ದಾಖಲೆಗಳು ಇವೆ. ಪ್ರಾಯಶಃ ಅವನೊಬ್ಬ ಬೇಡನಾಗಿದ್ದರಿಂದಲೇ ಅವನ ಕರೆಗೆ ಓಗೊಟ್ಟು ಸುರಪುರದ ಕಲಿಗಳು ಕಿತ್ತೂರಿನ ಸೈನ್ಯದಲ್ಲಿ ಸೇರಿರಬಹುದು.
ಶುಭ್ರವಾದ ಕನ್ನಡಿಯಲ್ಲಿ ಮೂಡುವ ಸ್ಪಷ್ಟ ಛಾಯೆಯಂತೆ ಈ ದಾಖಲೆಗಳಿರುವಾಗ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನನ್ನು ಕುರುಬ ಸಮುದಾಯಕ್ಕೆ ಯಾವ ಸಂದರ್ಭದಲ್ಲಿ ತೆಗೆದುಕೊಂಡು ಹೋಗಲಾಯಿತು ಎಂಬುದು ತಿಳಿಯದಾದ ಸಂಗತಿಯಾಗಿದೆ.
ಒಂದು ಸುಳ್ಳನ್ನು ನೂರಾರು ಬಾರಿ ಹೇಳುತ್ತಾ ಹೋದಂತೆ ಅದು ಚಾರಿತ್ರಿಕ ಸತ್ಯವಾಗಿ ಮಾರ್ಪಡುತ್ತಾ ಹೋಗುತ್ತದೆ. ಅಂಥ ಕ್ರಿಯೆಯೇ ರಾಯಣ್ಣನ ಕುರಿತಿರುವ ಚಾರಿತ್ರಿಕ ಸಂಗತಿಗಳಲ್ಲಿ ನಡೆದಿದೆ....(ಸಂಗ್ರಹ: ಹವೀಸಿಂಹ)